Rajarajeshwari Snataka Snatakottara Vidyakendra

ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನವು ವೇದವಿದ್ಯಾಕೇಂದ್ರವಾಗಿ ಖ್ಯಾತವಾಗಿದೆ. 1929 ರಲ್ಲಿ ಸರ್ವಜ್ಞೇಂದ್ರ ಸರಸ್ವತಿ ಸ್ವಾಮಿಗಳು “ವೇದಾಧ್ಯಯನವರ್ಧಿನೀ” ಎಂಬ ಹೆಸರಿನಲ್ಲಿ ಮಠದಲ್ಲಿ ವಿದ್ಯಾರ್ಥಿಗಳನ್ನಿಟ್ಟುಕೊಂಡು ಅವರಿಗೆ ಪಾಠಪ್ರವಚನ ನಡೆಸುತ್ತ ಬಂದು ಮುಂದೆ 1956 ರಲ್ಲಿ ರಾಜರಾಜೇಶ್ವರೀ ಸಂಸ್ಕೃತ ಪಾಠಶಾಲೆಯನ್ನು ಆರಂಭಿಸಿದರು.ಕಾಲೋಚಿತ ಪ್ರಯೋಗ, ಪ್ರಥಮಾ, ಕಾವ್ಯ , ಸಾಹಿತ್ಯ ಬೋಧನೆಯನ್ನು ಮಾಡುತ್ತ ಬಂದ ಈ ಸಂಸ್ಕೃತ ಪಾಠಶಾಲೆಯನ್ನು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಮಹಾವಿದ್ಯಾಲಯವನ್ನಾಗಿ ಪರಿವರ್ತಿಸಿದರು. ಕೃಷ್ಣಯಜುರ್ವೇದತರಗತಿ, ಅದ್ವೈತವೇದಾಂತ ಮತ್ತು ಮೀಮಾಂಸಾಶಾಸ್ತ್ರ ವಿದ್ವತ್ ಅಧ್ಯಯನವನ್ನೊಳಗೊಂಡ ಸಂಸ್ಕೃತ ಕಾಲೇಜು ಮಠದಲ್ಲಿದ್ದು ಈಗ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತ ಪ್ರಸಾದ ವಸತಿ ಸೌಲಭ್ಯ ಪಡೆದು ಅಧ್ಯಯನ ಮಾಡುತ್ತಿದ್ದಾರೆ. ಸಂಸ್ಕೃತ, ವಿದ್ಯಾಪ್ರಸಾರ ಮಾಡುವ ದೃಷ್ಟಿಯಿಂದ ಖಾಸಾಪಲ ಪೂರ್ಣಪ್ರಾಥಮಿಕ ಶಾಲೆ , ಶ್ರೀದೇವಿ ಪದವಿಪೂರ್ವ ಮಹಾವಿದ್ಯಾಲಯ ಹುಲಿಕಲ್, ಶ್ರೀ ಗಜಾನನ ಮಾಧ್ಯಮಿಕ ಶಾಲೆ ವಾನಳ್ಳಿ , ಈ ಸ್ಥಳಗಳಲ್ಲಿ ಬೋಧನಾವ್ಯವಸ್ಥೆ ಕೈಗೊಳ್ಳಲಾಗಿದೆ.ಶ್ರೀರಾಜರಾಜೇಶ್ವರಿ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಪ್ರತಿವರ್ಷ ಶಿಕ್ಷಕ ಸಮ್ಮೇಳನ, ಸಂಸ್ಕೃತೋತ್ಸವ ಜಿಲ್ಲಾಮಟ್ಟದ ಸಂಸ್ಕೃತ ಕಾಲೇಜು ಮತ್ತು ಪಾಠಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆ ನಡೆಸುವುದಲ್ಲದೆ ಸಂಸ್ಕೃತ ಶಿಕ್ಷಕರಿಗಾಗಿ ಚಿಂತನಗೋಷ್ಠಿಯನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ.

ಶ್ರೀ ಸ್ವರ್ಣವಲ್ಲೀ ಮಠವು ವೇದಾಧ್ಯಯನಕ್ಕೆ ವಿಶೇಷ ಮಹತ್ತ್ವನೀಡುತ್ತಿದೆ.ಸನಾತನ ಸಂಸ್ಕೃತಿಯ ಬೆಳವಣಿಗೆಗೆ ಪ್ರಚಾರ ಪ್ರಸಾರ ಮಾಡುವುದು ಧರ್ಮಕೇಂದ್ರವಾದ ಶ್ರೀ ಸ್ವರ್ಣವಲ್ಲೀ ಮಠದ ಪರಮಧ್ಯೇಯವಾಗಿದೆ.ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ವೇದಪಾರಾಯಣ ಕಾರ್ಯಕ್ರಮವನ್ನು ಶ್ರದ್ಧೆಯಿಂದ ನಡೆಸಲಾಗಿದೆ.ವೇದೋಪನ್ಯಾಸವನ್ನು ವಿದ್ವಾಂಸರಿಂದ ಮಾಡಿಸುವುದರ ಮೂಲಕ ವೇದಶಾಸ್ತ್ರ ಪರಿಚಯ ಸಾಮಾನ್ಯರಿಗಾಗುವಂತೆ ಮಾಡಲಾಗಿದೆ.”ವೇದಸಂಗಮ” ಕಾರ್ಯಕ್ರಮದಂತೆ ಶ್ರೀಮಠದಲ್ಲಿ ಋಗ್ವೇದ ಸಂಹಿತಾಯಾಗ ಕೃಷ್ಣಯಜುರ್ವೇದಮಂತ್ರ ಸ್ವಾಹಾಕಾರ ಯಾಗ, ಶುಕ್ಲಯಜುರ್ವೇದ ಮಂತ್ರ ಸ್ವಾಹಾಕಾರ ಯಾಗ , ಸಾಮವೇದ ಮಂತ್ರ ಸ್ವಾಹಾಕಾರ ಯಾಗ , ದಿವ್ಯ ಭೌಮಾಂತರಿಕ್ಷ ಉತ್ಪಾತಶಾಂತಿ, ಮಹಾರುದ್ರ ಪಾರಾಯಣ, ಮಹಾರುದ್ರ ಹವನ, ಮೊದಲಾದ ಯಜ್ಞಕಾರ್ಯವನ್ನು “ವೇದಸಂಗಮ”ದ ಸಮಾರೋಪಾಂಗವಾಗಿ ನಡೆಸಲಾಗಿದೆ.”ವೇದಗಳು ಜ್ಞಾನದ ಭಂಡಾರಗಳು, ಪರಮಾತ್ಮನ ಮುಖದಿಂದ ಹೊರಹೊಮ್ಮಿತೆಂದು ಹೇಳಲಾದಕಾರಣ ಭಾರತೀಯರಿಗೆ ಅವು ಪರಮಪವಿತ್ರವಾದವುಗಳು. ವೇದಗಳ ಬಗ್ಗೆ ನಮ್ಮ ಭಕ್ತಿಶ್ರದ್ಧೆ ಹೆಚ್ಚಿದಷ್ಟೂ ನಾವು ಪ್ರಾಚೀನ ಜ್ಞಾನ ಭಂಡಾರದ ಶ್ರೀಮಂತಿಕೆಯನ್ನು ಕಾಣಲು ಸಾಧ್ಯವಾಗುತ್ತದೆ”ಎಂಬ ಶ್ರೀ ಗಂಗಾಧರೇಂದ್ರ ಸರಸ್ವತಿಗಳ ವಾಣಿಯು ವೇದ ವಿದ್ಯಾ ವ್ಯಾಸಂಗಕ್ಕೆ ಸ್ಫೂರ್ತಿದಾಯಕವಾಗಿದೆ. ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಕ್ಷೇತ್ರೀಯ ವೇದಸಮ್ಮೇಳನವನ್ನು ತುಂಬ ಯಶಸ್ವಿಯಾಗಿ ನಡೆಸಿದ್ದಲ್ಲದೇ “ಸ್ವಾಧ್ಯಾಯಪ್ರವಚನಾಭ್ಯಾಂ ನ ಪ್ರಮದಿತವ್ಯಮ್”ಎಂಬ ವೇದಾದೇಶದಂತೆ ನಡೆಯಲು ಗುರುಗಳು ಪ್ರೇರಣೆಯಾಗಿದ್ದಾರೆ.
This website can be best viewed Google Crome,Firefox, Internet Explorer 9 and above.
Designed & Maintained By hk-ngtech.com

© All rights reserved