Bhagavadpada Prakashana

ಪುಸ್ತಕಪ್ರಕಾಶನ ಕಾರ್ಯದಲ್ಲೂ ಶ್ರೀ ಸ್ವರ್ಣವಲ್ಲೀ ಮಠವು ಮಹತ್ತ್ವದ ಕಾರ್ಯ ಮಾಡುತ್ತಿದೆ.”ಪುಸ್ತಕಗಳು ಜನತೆಯನ್ನಾಳುತ್ತವೆ” ಎಂಬ ಪ್ರಸಿದ್ಧವಾದ ಮಾತು ಇದೆ. ಪ್ರಪಂಚದಲ್ಲಿ ಧರ್ಮ ,ಸಂಸ್ಕೃತಿ, ಸಾಹಿತ್ಯಪ್ರಸಾರದಲ್ಲಿ ಪುಸ್ತಕಗಳ ಪಾತ್ರ ಅದ್ವಿತೀಯವಾದದ್ದು.”ಶ್ರೀ ಸರ್ವಜ್ಞೇಂದ್ರ ಸರಸ್ವತಿಗಳ” ಕಾಲದಲ್ಲೇ ಪುಸ್ತಕ ಪ್ರಕಟಣೆಯ ಕಾರ್ಯ ಆರಂಭಗೊಂಡಿದೆ.1934 ರಷ್ಟು ಹಿಂದೆಯೇ “ಬೋಧಾಯನೀಯ ನಿತ್ಯಕರ್ಮ”ಪ್ರಕಟಗೊಂಡಿದೆ. ಈ ಹಿಂದೆ ಪ್ರಸ್ತಾಪಿಸಿದಂತೆ ಸ್ವತಃ ಗುರುಗಳಾದ ಶ್ರೀ ಸರ್ವಜ್ಞೇಂದ್ರ ಸರಸ್ವತಿ ಸ್ವಾಮಿಗಳು ಸಂಸ್ಕೃತ ಕವಿ, ಮತ್ತು ನಾಟಕಾರರಾಗಿದ್ದರೆಂಬುದೂ ಗಮನಾರ್ಹ. “ಸ್ವರ್ಣವಲ್ಲೀ ದರ್ಶನ” ಮತ್ತು “ಸ್ವರ್ಣವಲ್ಲೀ ಪ್ರಕಾಶ”ಎಂಬ ಕೃತಿಗಳು ಶ್ರೀಮಠದಿಂದ ಪ್ರಕಟವಾಗಿದೆ. ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಪೀಠಕ್ಕೆ ಬಂದ ನಂತರ ಪುಸ್ತಕ ಪ್ರಕಟನೆ ಕಾರ್ಯಕ್ಕೆ ವಿಶೇಷ ಚಾಲನೆ ದೊರೆತಿದೆ. ಮೊದಲು ಕೆಲವರ್ಷ ಸರ್ವಜ್ಞೇಂದ್ರ ಪ್ರತಿಷ್ಠಾನದ ಮೂಲಕ ಪುಸ್ತಕ ಬರುತ್ತಿದ್ದರೆ ಈಗ ಭಗವತ್ಪಾದ ಪ್ರಕಾಶನದ ಮೂಲಕ ಪುಸ್ತಕ ಪ್ರಕಟಣೆಯ ಕಾರ್ಯ ಕೈಗೊಳ್ಳಲಾಗಿದೆ.

ಪ್ರಾಚೀನ ಹಸ್ತಪ್ರತಿ, ತಾಡೋಲೆ ಕಡತಗಳನ್ನು ಸಂಗ್ರಹಿಸಿ ಅವುಗಳ ದೊಡ್ಡ ಭಂಡಾರ ತೆರೆದು ಸಂಪಾದನೆ, ಪಾಠಪರಿಷ್ಕರಣ, ಪ್ರಕಾಶನ ಕಾರ್ಯಕೈಗೊಳ್ಳುವುದು, ಶ್ರೀಗಳ ಪ್ರವಚನ ಸಂಪುಟಗಳನ್ನು ತರುವುದು, ಶ್ರೀಮಠದಲ್ಲಿ ಜರುಗುವ ವಿವಿಧ ವಿಚಾರಸಂಕಿರಣಗಳ ವಿದ್ವತ್ ಪ್ರಬಂಧಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುವುದು, ಭಾರತೀಯ ಸಂಸ್ಕೃತಿಯ ಆಧ್ಯಾತ್ಮಜ್ಯೋತಿಗಳು ಪುಸ್ತಕ ಮಾಲೆ, ಆದಿಶಂಕರ ವೇದಾಂತ ಸಾಹಿತ್ಯ ಮಾಲೆ, ಅದ್ವೈತ ದರ್ಶನಕ್ಕೆ ಸಂಬಂಧಿಸಿದ ಹಾಗೂ ಸಂಸ್ಕೃತಿ ಕಲೆ ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನೂ ಧಾರ್ಮಿಕ ಕೃತಿಗಳನ್ನೂ ಪ್ರಕಟಿಸುವ ಘನವಾದ ಉದ್ದೇಶ ಶ್ರೀ ಭಗವತ್ಪಾದ ಪ್ರಕಾಶನದ್ದಾಗಿದೆ. ವಿವಿಧ ಭಗೆಯ ಪುಸ್ತಕಗಳ ಮೂಲಕ ಧರ್ಮ, ಸಂಸ್ಕೃತಿ, ಸಾಹಿತ್ಯ, ಪ್ರಸಾರ ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿದೆ.

ಶ್ರೀ ಸ್ವರ್ಣವಲ್ಲೀ ಮಠದ 54 ನೇ ಯತಿಗಳಾದ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಪೀಠಾರೋಹಣದ ಸಂದರ್ಭದಲ್ಲಿ “ಶ್ರೀ ಸವಜ್ಞೇಂದ್ರರು” ಗ್ರಂಥವನ್ನು ಪ್ರಕಟಿಸಲಾಗಿದೆ. ಬ್ರಹ್ಮೈಕ್ಯರಾದ ಶ್ರೀ ಸವಜ್ಞೇಂದ್ರರ ವ್ಯಕ್ತಿತ್ವ ಸಾಧನೆ, ಸಿದ್ಧಿಗಳನ್ನು ಕುರಿತಾದ ಲೇಖನಗಳನ್ನೊಳಗೊಂಡ ಈ ಗ್ರಂಥವು ಹಿಂದಿನ ಗುರುಗಳ ಗೌರವ ಗ್ರಂಥವಾಗಿದೆ. ಹನ್ನೆರಡುನೂರು ವರ್ಷಗಳ ಸುದೀರ್ಘ ಇತಿಹಾಸವಿರುವ ಸ್ವರ್ಣವಲ್ಲೀ ಮಠದ ಇತಿಹಾಸವನ್ನು ಸಮಗ್ರ ಆಕರ ಸಾಮಗ್ರಿಗಳನ್ನು ಮುಂದಿಟ್ಟುಕೊಂಡು ರಚಿಸುವ ಕಾರ್ಯವನ್ನು ಪ್ರಸಿದ್ಧ ಇತಿಹಾಸ ಸಂಶೋಧಕರಾದ ಡಾ.ಎ.ಕೆ. ಶಾಸ್ತ್ರಿಯವರು ಮಾಡಿದ್ದು ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದ ಚರಿತ್ರೆ”ಎಂಬ ಅವರ ಸಂಶೋಧನ ಗ್ರಂಥವನ್ನು ಶ್ರೀಮಠವು ಪ್ರಕಟಿಸಿದೆ. ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ವಿದ್ವಾಂಸರು. ಅದ್ಭುತ ಮೇಧಾಶಕ್ತಿಯುಳ್ಳವರು . ಅವರು ಮಾಡಿದ ಪ್ರವಚನಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿ ಭಕ್ತಕೋಟಿಗೆ ನೀಡುವ ಕಾರ್ಯವನ್ನು ಕೈಗೊಳ್ಳಲಾಗಿದೆ.ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಪ್ರವಚನಗಳ ಹಲವು ಸಂಪುಟಗಳು ಪ್ರಕಟವಾಗಿವೆ. “ಸ್ವರ್ಣವಲ್ಲೀ ಸುಧಾ” ಎರಡು ಭಾಗಗಳಲ್ಲಿ ಬಂದಿದ್ದು ಅವುಗಳು ಬೇರೆ ಬೇರೆ ಸಂದರ್ಭಗಳಲ್ಲಿ ಶ್ರೀಗಳು ಮಾಡಿದ ಪ್ರವಚನಗಳಾಗಿವೆ. ಶ್ರೀ ಸ್ವರ್ಣವಲ್ಲೀ ಮಠವು ಹಮ್ಮಿಕೊಂಡ “ಗಾಯತ್ರೀ ಜಪಯಜ್ಞ” ಅಭಿಯಾನದ ಸಂದರ್ಭದಲ್ಲಿ ಶ್ರೀಗಳು ವಿವಿಧ ಸ್ಥಳಗಳಲ್ಲಿ ಮಾಡಿದ ಗಾಯತ್ರೀ ಜಪದ ಮಹತ್ತ್ವವನ್ನು ತಿಳಿಸುವ ಪ್ರವಚನಗಳು “ಗಾಯತ್ರೀ ಜಪಯಜ್ಞ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿದೆ. ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಶಿರಸಿಯಲ್ಲಿ ಭಾರತೀಯರಿಗೆ ಪೂಜ್ಯ ಗ್ರಂಥವಾದ ಭಗವದ್ಗೀತೆಯನ್ನು ಕುರಿತು ಪ್ರವಚನ ಮಾಡುತ್ತಿದ್ದಾರೆ.ಶ್ರೀಗಳಭಗವದ್ಗೀತಾಪ್ರವಚನವನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುತ್ತಿದ್ದು ಈಗಾಗಲೇ “ಶ್ರೀ ಭಗವದ್ಗೀತೆ ಅಧ್ಯಾತ್ಮ ವಿದ್ಯೆ” ಮೊದಲ ಸಂಪುಟ ಪ್ರಕಟವಾಗಿದೆ. ಶ್ರೀಗೀತಾಭಾವಧಾರೆ ಅದ್ವೈತ ದೃಷ್ಟಿಯ ಗೀತಾಪ್ರವಚನವಾಗಿ ಜನಪ್ರಿಯವಾಗಿದೆ. ಶ್ರೀಗಳ ಚಿಂತನ ಸಂಪುಟ “ಶ್ರೀಗಳ ಸಂದೇಶಗುಡಿ” ಶೀರ್ಷಕೆಯಡಿಯಲ್ಲಿ ಪ್ರಕಟವಾಗಿದೆ.

ಧಾರ್ಮಿಕ ವಿಧಿ ವಿಧಾನಗಳಿಗೆ ಸಂಬಂಧಿಸಿದ ಕೃತಿಗಳನ್ನೂ ಮಂತ್ರಪುಸ್ತಕಗಳನ್ನೂ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಪ್ರಕಟಿಸುವ ಗುರುತರ ಕಾರ್ಯ ಮಾಡಿದೆ. “ಬೋಧಾಯನೀಯ ನಿತ್ಯಕರ್ಮ”ದ 5 ಸಾವಿರ ಪ್ರತಿಗಳು ಭಕ್ತರ ಕೈ ಸೇರಿದ್ದು ಈಗ ಅದು ಪುನರ್ಮುದ್ರಣಗೊಳ್ಳುತ್ತಿದೆ. ಸಂಧ್ಯಾವಂದನೆಯ ಪುಸ್ತಕಗಳನ್ನೂ ಹೊರತರಲಾಗಿದೆ. ಶ್ರೀಮಠದ ಆರಾಧ್ಯ ದೇವರು ಶ್ರೀ ಲಕ್ಷ್ಮೀನರಸಿಂಹ.ಆದ್ದರಿಂದ “ಲಕ್ಷ್ಮೀನರಸಿಂಹ ಕಲ್ಪೋಕ್ತಪೂಜಾವಿಧಿ” ಪುಸ್ತಕ ಪ್ರಕಟಿಸಲಾಗಿದೆ.ಶ್ರೀಗಳು ನಿರ್ದೇಶಿದಂತೆ ಶ್ರೀಲಕ್ಷ್ಮೀನಾರಾಯಣ ಹೃದಯ ಪಾರಾಯಣ ಅಭಿಯಾನದ ಸಂದರ್ಭದಲ್ಲಿ ಶ್ರೀಲಕ್ಷ್ಮೀನಾರಾಯಣ ಪೂಜಾವಿಧಿ ಮತ್ತು “ಶ್ರೀಲಕ್ಷ್ಮೀನಾರಾಯಣಹೃದಯ” ಪಾರಾಯಣ ಪುಸ್ತಕಗಳನ್ನು ಹತ್ತು ಸಾವಿರ ಪ್ರತಿಗಳನ್ನು ಪ್ರಕಟಿಸಲಾಗಿದೆ. “ಗಾಯತ್ರೀ ಮಹತ್ತ್ವ” “ಸಂಧ್ಯಾವಂದನೆ” ಧ್ವನಿಮುದ್ರಿಕೆಗಳು ಜನಪ್ರಿಯವಾಗಿವೆ.

ಭಾರತದ ಅಧ್ಯಾತ್ಮ ಪ್ರಪಂಚದ ಮಹಾಚೇತನವಾದ ಆದಿಶಂಕರಾಚಾರ್ಯರು ಅವತರಿಸಿ ಅದ್ವೈತ ತತ್ತ್ವವನ್ನು ಉಪದೇಶಿಸಿರುವುದು ನಮ್ಮ ಭಾಗ್ಯವಿಶೇಷವಾಗಿದೆ. ಆದಿಶಂಕರರ 1212ನೇ ವರ್ಷದ ಜಯಂತಿಯ ಸಂದರ್ಭದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಶ್ರೀಮಠದಲ್ಲಿ ಆದಿಶಂಕರರನ್ನು ಕುರಿತು ರಾಷ್ಟ್ರೀಯ ವಿಚಾರಸಂಕಿರಣವನ್ನು ನಡೆಸಲು ಮಾರ್ಗದರ್ಶನ ನೀಡಿದರು. ಶಂಕರರ ಜಯಂತಿಯಂದು (“2”, 3, 4 ಮೇ 2000)ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಶ್ರೀ ಶಂಕರಾಚಾರ್ಯರನ್ನು ಕುರಿತ ರಾಷ್ತ್ರೀಯ ಸಂಕಿರಣವನ್ನು ಕಂಚಿ ಕಾಮಕೋಟಿ ಪೀಠದ ಗುರುಗಳಾದ ಶ್ರೀ ಶ್ರೀ ಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಉದ್ಘಾಟಿಸಿ ಆಶೀರ್ವದಿಸಿದರು. ಪ್ರಾಸ್ತಾವಿಕ ಉಪನ್ಯಾಸ ಮಾಡಿದ ಶ್ರೀ ಗಂಗಾಧರೇಂದ್ರ ಸರಸ್ವತಿಯವರು ಆದಿಶಂಕರಾಚಾರ್ಯರು ಭಾರತದ ತುಂಬ ಸಂಚರಿಸಿ ಹಿಂದೂ ಧರ್ಮ ಸಂಸ್ಕೃತಿಯ ಪುನಶ್ಚೇತನಗೊಳಿಸಿದರು. ಅವರು ಎಲ್ಲ ಅರ್ಥದಲ್ಲೂ ರಾಷ್ಟ್ರೀಯ ವ್ಯಕ್ತಿ. ಆ ಮಹಾಚೇತನ ಇಂದಿಗೂ ಪ್ರಸ್ತುತ. ಎಂದೆಂದಿಗೂ ಪ್ರಸ್ತುತ ಎಂದರು. ರಾಷ್ಟ್ರೀಯ ವಿಚಾರಸಂಕಿರಣದ ಎಲ್ಲ ಉಪನ್ಯಾಸಗಳನ್ನು ಆಲಿಸಿದ ಶ್ರೀ ಗಂಗಾಧರೇಂದ್ರ ಸರಸ್ವತಿಯವರು ಸಮಾರೋಪ ಆಶೀರ್ವಚನ ನೀಡಿ ಈ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಶಂಕರಾಚಾರ್ಯರ ಅದ್ವೈತದರ್ಶನದ ವೈಜ್ಞಾನಿಕತೆಯ ಬಗ್ಗೆ ಅದರ ಅನುಷ್ಠಾನ ವೇದಾಂತದ ಬಗೆಗೆ ಮೊಟ್ಟಮೊದಲಬಾರಿಗೆ ಮಹತ್ತ್ವಪೂರ್ಣ ವಿಚಾರಗಳು ಮಂಡಿತವಾಗಿವೆ. ಈ ಎಲ್ಲ ಪ್ರಬಂಧಗಳು ಪುಸ್ತಕ ರೂಪದಲ್ಲಿ ಬರಬೇಕು ಎಂದು ನಿರ್ದೇಶಿಸಿದ ಫಲವಾಗಿ ಮೂಡಿಬಂದ ಕೃತಿ ಈ “ಶ್ರೀಶಂಕರಾಚಾರ್ಯರ ಅದ್ವೈತದರ್ಶನ” ಗ್ರಂಥವು ಶ್ರೀ ಭಗವತ್ಪಾದ ಪ್ರಕಾಶನದ ಹೆಮ್ಮೆಯ ಪ್ರಕಟಣೆಯಾಗಿದೆ. ಶಂಕರಾಚಾರ್ಯರ ಅದ್ವೈತ ವೇದಾಂತದ ವಿರಾಟ್ ದರ್ಶನವನ್ನು ಮೂಡಿಸುವ ಲೇಖನಗಳೂ ಅದ್ವೈತದರ್ಶನದ ವೈಜ್ಞಾನಿಕತೆ, ಅದರ ಅನುಷ್ಠಾನ ವೇದಾಂತ ಮತ್ತು ಭಾರತೀಯ ಸಾಹಿತ್ಯದಲ್ಲಿ ಅದ್ವೈತ ದರ್ಶನವು ವೈಜ್ಞಾನಿಕ ಮಹತ್ತ್ವಪಡೆದಿರುವುದಲ್ಲದೇ ಅದು ಭಾರತದ ವಿವಿಧ ಭಾಷಾ ಸಾಹಿತ್ಯಗಳದಲ್ಲಿ ಮೈದಾಳಿ ನಿಂತ ಬಗೆಯನ್ನು ಗ್ರಂಥದ ಲೇಖನಗಳು ಮೊಟ್ಟ ಮೊದಲಬಾರಿಗೆ ವಿದಿತಪಡಿಸುವ ಮೂಲಕ ಶ್ರೀಶಂಕರಾಚಾರ್ಯರ ಅದ್ವೈತ ದರ್ಶನದ ವಿಶ್ವತೋಮುಖವನ್ನು ದರ್ಶಿಸುವಂತೆ ಮಾಡಿದೆ. ”ಶ್ರೀ ಶಂಕರಾಚಾರ್ಯರ ಸ್ತೋತ್ರರತ್ನಮಾಲೆ” ಜನಪ್ರಿಯ ಆವೃತ್ತಿಯಾಗಿದ್ದು ಅದು ದ್ವಿತೀಯ ಮುದ್ರಣ ಕಂಡಿದೆ. ಭಾರತೀಯ ವೇದ ಸಾಹಿತ್ಯಮಾಲೆಯಲ್ಲಿ “ಕೃಷ್ಣಯಜುರ್ವೇದ ಸ್ವಾಹಾಕರವಿಧಿಯ”ಎರಡು ಬೃಹತ್ ಸಂಪುಟಗಳನ್ನುಪರಿಷ್ಕರಿಸಿ ಪ್ರಕಟಿಸಲಾಗಿದೆ. “ಕೃಷ್ಣಯಜುರ್ವೇದ ಸ್ವಾಹಾಕರವಿಧಿ” ಮೊದಲಬಾರಿಗೆ ವಿದ್ವತ್ಪೂರ್ಣ ಹೊತ್ತಿಗೆಯಾಗಿ ಪ್ರಕಟವಾಗುತ್ತಿರುವುದು ಗಮನಿಸುವ ಅಂಶವಾಗಿದೆ.

ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಪೀಠಾರೋಹಣದ ದಶಮಾನೋತ್ಸವ ವರ್ಷದಲ್ಲಿ ಹತ್ತು ಗ್ರಂಥವನ್ನು ಪ್ರಕಟಿಸುವ ಯೋಜನೆಯನ್ನು ಶ್ರೀ ಭಗವತ್ಪಾದ ಪ್ರಕಾಶನ ಸಂಸ್ಥೆ ರೂಪಿಸಿತು. “ಭಾರತದ ಅಧ್ಯಾತ್ಮ ಪ್ರಪಂಚದ ಜ್ಯೊತಿಗಳು” ಎಂಬ ಜನಪ್ರಿಯ ಪುಸ್ತಕಮಾಲೆ ಇವುಗಳಲ್ಲಿ ಒಂದಾಗಿದೆ. ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ದುಡಿದ ವಿಭೂತಿ ಚೇತನಗಳ ಜೀವನ ಸಾಧನೆಯನ್ನು ತಿಳಿಸುವ ಈ ಗ್ರಂಥಮಾಲೆಯಲ್ಲಿ ಈಗಾಗಲೇ ಮೂರು ಪುಸ್ತಕಗಳು ಪ್ರಕಟವಾಗಿವೆ. ವಿಭೂತಿಪುರುಷ ವಿದ್ಯಾರಣ್ಯರು, ಶ್ರೀ ಸರ್ವಜ್ಞೇಂದ್ರರು, ಶ್ರೀ ಬೃಹತ್ ಗಂಗಾಧರೇಂದ್ರ ಸರಸ್ವತಿ, ಕೃತಿಗಳು ಬಂದಿವೆ. ಶ್ರೀ ಸ್ವರ್ಣವಲ್ಲೀ ಮಠದ ಗುರುಪರಂಪರೆಯನ್ನು ವರ್ಣಿಸುವ ಸಂಸ್ಕೃತ ಕಾವ್ಯ “ಗುರುವಂಶ ಚರಿತಮ್” ಕೃತಿಯನ್ನು ಪ್ರಕಟಗೋಳಿಸಲಾಗಿದೆ. “ಸನಾತನ ಸಂಸ್ಕಾರಗಳು” ಗ್ರಂಥವು ನಮ್ಮ ಪರಂಪರೆಯಲ್ಲಿ ಸಂಸ್ಕಾರಗಳು ಎಷ್ಟು ಮಹತ್ತ್ವಪೂರ್ಣವಾದಾವುಗಳು ಎಂಬುದನ್ನು ತಿಳಿಸುತ್ತವೆ.

ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಪೀಠಾರೋಹಣ ದಶಮಾನೋತ್ಸವ ಸಂಪುಟದಲ್ಲಿ ಶ್ರೀಗಳು ಶ್ರೀ ಸ್ವರ್ಣವಲ್ಲೀ ಮಠಕ್ಕೆ ಗುರುಗಳಾಗಿ ಬಂದ ನಂತರ ಕಳೆದ ಹತ್ತು ವರ್ಷಗಳಲ್ಲಿ ವಿವಿಧ ರಂಗಗಳಲ್ಲಿ ನಡೆದ ಕಾರ್ಯಗಳ ಸಮೀಕ್ಷಾತ್ಮಕ ಲೇಖನಗಳಿವೆ. ಶ್ರೀಗಳ ಪೀಠಾರೋಹಣ ದಶಮಾನೋತ್ಸವ ಸಮಾರಂಭದಲ್ಲಿ “ನಮ್ಮ ಪ್ರೀತಿಯ ಸ್ವಾಮೀಜಿ” ಎಂಬ ಗುರುವಂದನಾ ಗ್ರಂಥವನ್ನು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳಿಗೆ ಅರ್ಪಿಸಲಾಗಿದೆ. ಇದರಲ್ಲಿ ಸ್ವಾಮೀಜಿಯವರ ಬಹುಮುಖ ಪ್ರತಿಭೆ ವ್ಯಕ್ತಿತ್ವದ ಮಹೋನ್ನತ ಗುಣಗಳನ್ನು ವರ್ಣಿಸುವ ನಲವತ್ತೇಳು ಪ್ರೀತಿ ಗೌರವಪೂರ್ವಕವಾದ ಹೃದಯಸ್ಪರ್ಶಿ ಅನುಭವದ ಲೇಖನಗಳಿವೆ.
This website can be best viewed Google Crome,Firefox, Internet Explorer 9 and above.
Designed & Maintained By hk-ngtech.com

© All rights reserved